ಒಮೊಮ್ಮೆ ನನಗೆ ಅನಿಸುತ್ತದೆ, ನನ್ನೊಳಗೆ ಎರಡೆರಡು ಜೀವ ಇದೆ . ಒಂದು ನಾನು. ನನ್ನ ದೇಹ, ನನ್ನ ಮನಸ್ಸು ಮತ್ತು ನನ್ನ ಮನಃಸಾಕ್ಷಿ . ಇನ್ನೊಂದು ಕೇವಲ ಧ್ವನಿಯಾಗಿ ಉಳಿದಿರುವ ಒಂದು ಶುದ್ಧ ತಾರ್ಕಿಕ ಮನುಷ್ಯ. ಈ ಮನುಷ್ಯನ ಪ್ರಭಾವ ನನ್ನಮೇಲೆ ಕಡಿಮೆ ಏನು ಅಲ್ಲ.ಹಾಗಿದ್ದರೂ ಹೆಚ್ಚಾಗಿ ಇವನ ಮಾತು ನಾನು ಕೇಳುವುದಿಲ್ಲ. ಇವನದು ಬರೀ ಲೆಕ್ಕಾಚಾರ - ಭಯ, ಭೀತಿ, ನಗುವು ಅಳುವು ಯಾವದೂ ಇಲ್ಲ. ಕೆಲವೊಮ್ಮೆ ನನ್ನೊಟ್ಟಿಗೆ ಬೇಡದೇ ಇರೊ ಅಧಿಕಪ್ರಸಂಗ ಕೂಡ ಮಾಡುತ್ತಾನೆ. ಆದರೆ ಒಟ್ಟು ಎಲ್ಲ ಸೇರಿಸಿ ನೋಡಿದರೆ ಒಳ್ಳೆ ಉಪದೇಶವನ್ನೇ ಮಾಡುತ್ತಾನೆ ಮತ್ತು ಇನ್ನೂ ಮುಖ್ಯವಾಗಿ ಒಳ್ಳೆ ಉದ್ದೇಶ ಇಟ್ಟುಕೊಂಡು ಅವನಿಗೆ ತಿಳಿದಿರುವ ವಿಷಯಗಳನ್ನು ಹೇಳುತ್ತಾನೆ. ನನ್ನ ಮಿತ್ರ ಅಂತಾನೇ ಹೇಳಬಹುದು.
ಇನ್ನ ಮುಂದೆ ಇವನನ್ನು ‘ತಾ’ ಎಂದು ಮತ್ತೆ ನನನ್ನು ‘ನ’ ಎಂದು ಕರೆಯಲಾಗುತ್ತದೆ -
ತಾ : ಏನಪ್ಪ ಈ ನಡುವೆ ದೇವರು ದಿಂಡ್ರು ಅಂತೆಲ್ಲ ನಿಂದು ಜಾಸ್ತಿ ಆಗುತ್ತಾ ಇದೆ. ನಿನ್ನೆ ಜನಮಾಷ್ಟಮಿ ಪೂಜೆಗೂ ಕೂಡ ಹೋದೆ. ಒಬ್ಬ ವಿಜ್ಞಾನಿಯಾಗಿ ಇದೆಲ್ಲ ಮಾಡುವುದು ಸರೀ ನಾ?
ನ : ಏನು ಮಾಡಿದೆ ಈಗ ನಾನು? ದೇವರು ಅಂತಲ್ಲ, ಸುಮ್ಮನೆ ಹಾಗೆ ಒಂದು ಹೊಸ ದೃಷ್ಟಿಕೋನದಿಂದ ಎಲ್ಲ ವಿಷಯಗಳನ್ನ ನೋಡಲು ಸ್ವಲ್ಪ ನಮ್ಮ ಧರ್ಮದ ತತ್ವಗಳ ಬಗ್ಗೆ ಕೇಳುತ್ತಿದ್ದೇನೆ.
ತಾ : ಆಹಾ ಸ್ವಲ್ಪವೇನೋ? ಪ್ರತಿರಾತ್ರಿ ಭಗವದ್ಗೀತೆ ಪ್ರವಚನಾ ನೇ ಕಿವಿಗೆ ಹಾಕೊಂಡು ನಿದ್ರೆ ಮಾಡುವುದು ಸ್ವಲ್ಪ ನಾ?
ನ : ದಿನಾಗಲೂ ಒಂದು ೫-೧೦ ನಿಮಿಷ ಅಷ್ಟೇ. ಅದರಲ್ಲಿ ಹೇಗೆ ಬಾಳುವುದು ಅಂತ ಉಪದೇಶ ಮಾಡುತ್ತಾರೆ. ಅದಕ್ಕೂ ವಿಜ್ಞಾನಕ್ಕೂ ಏನು ಸಂಬಂಧ?
ತಾ : ಲೇ! ಅದು, ದೇವರು ಹೀಗೆ, ಸೃಷ್ಟಿ ಹಾಗಾಯಿತು, ಲೋಕದ ಗುಣ ಹೀಗೆ ಅಂತೆಲ್ಲ ಬಾಯಿಗೆ ಬಂದಂತೆ ಹೇಳುವುದಿಲ್ಲವೇ?
ನ : ಅದು ಅಲ್ಲ! ಅವರು
ತಾ : ಯಾರು?
ನ : ವೇದ ವ್ಯಾಸರು
ತಾ : ಆಯಿತಪ್ಪ .ರಾಜಕೀಯ ಸೇರು ನೀನು.ಹೀಗೆ ವಿಷಯ ಬದಲಾಯಿಸಿ ಬದಲಾಯಿಸಿ ಉದ್ದಾರ ಆಗುತ್ತೀಯ. ಅದೋ ಅವರೋ. ನಾನು ಕೇಳಿದ್ದೇನು?
ನ : ಅಲ್ಲ ಹೇಳಿದ್ದು ಅಷ್ಟೇ. ಭಗವದ್ಗೀತೆ ಒಂದು ವಸ್ತು ಮಾತ್ರವಲ್ಲ.ಅದು ಯಾರೋ ಬರೆದಿದ್ದು.
ತಾ : ಏನೀಗ? ಸರಿ, ಅವನು ಇರೋ ಬರೋ ಮಾತಾಡುತ್ತಾನೆ. ವೇದ ವ್ಯಾಸಾ ನೇ
ನ : ನೋಡಪ್ಪ, ನಿನ್ನ ತರ್ಕ ಏನಾಗಿದ್ದರು ಒಂದು ಗುರಿ ಇದ್ದರೆ ಮಾತ್ರ ಕೆಲಸಕ್ಕೆ ಬರುವುದು. ಹೀಗೆ ಸುಮ್ಮನೆ ಗುರಿ ಇಲ್ಲದ ತರ್ಕಕ್ಕೆ ಏನು ಅರ್ಥ ಇಲ್ಲ.
ತಾ : ಅಂದ್ರೆ?
ನ : ನಮಗೆ ಏನೋ ಒಂದು ಬೇಕು ಅಂದರೆ ತಾರ್ಕಿಕವಾಗಿ ಅದು ಹೇಗೆ ಪಡೆಯಬಹುದು ಎನ್ನುವದರ ಬಗ್ಗೆ ಚಿಂತನೆ ಮಾಡಬಹುದು. ಅಥವಾ ನಾವು ಏನನ್ನೋ ಕಂಡಿದ್ದೇವೆ ಅಂದ್ರೆ ಅದನ್ನು ವಿವರಿಸಲು ನಮಗೆ ತರ್ಕ ಬೇಕು.ಎಲ್ಲಿಯ ವರೆಗೆ ನಮಗೆ ತಿಳುವಳಿಕೆ ಇದೆಯೋ ಅಲ್ಲಿಂದ ತರ್ಕದಿಂದ ಮುಂದೆವರೆದು ನಾವು ಕಂಡಿದ್ದನ್ನು ಸ್ಪಷ್ಟವಾಗಿ ವಿವರಿಸಬಹುದು
ತಾ : ಒಪ್ಪಿಕೊಂಡೆ.ಅದೇ ನಾನು ಯಾವಾಗಲೂ ಹೇಳುವುದು.ನೀನು ಕೇಳುವುದಿಲ್ಲ
ನ : ನಾನು ಕೇಳುತ್ತೇನೆ.ಆದರೆ ನೀನು ಅರ್ಥ ಮಾಡಿಕೊಳ್ಳುವುದಿಲ್ಲ. ನನ್ನ ಗುರಿ ಏನು?
ತಾ : ಒಬ್ಬ ದೊಡ್ಡ ಮತ್ತು ಪ್ರಸಿದ್ಧ ವಿಜ್ಞಾನಿ ಆಗುವುದೇ? ಅಥವಾ ಒಂದು ಸೊಗಸಾದ ಹುಡುಗಿಯನ್ನು ಕಟ್ಟಿಕೊಳ್ಳುವುದೇ?
ನ : ನೋಡು ಇದೇ ನಿನ್ನ ಸಮಸ್ಯೆ .ಯಾವದೋ ಒಂದೋ ಎರಡೋ ವಿಷಯ ಹಿಡಿದುಕೊಂಡು ಇರುತ್ತೀಯ. ಸಾಮಾನ್ಯವಾಗಿ ಏನು ಬೇಕು ಒಬ್ಬ ಮನುಷ್ಯನಿಗೆ?
ತಾ : ನಾನು ಒಂದು ಯಂತ್ರ.ಮನುಷ್ಯರ ಭಾವನೆಗಳ ಬಗ್ಗೆ ನನಗೇನು ಗೊತ್ತಿಲ್ಲ
ನ : ಒಹೋ!! ನಿನ್ನಿಂದ “ಗೊತ್ತಿಲ್ಲ” ಎನ್ನುವ ಮಾತು ಕೇಳಿದ್ದೇ ನನ್ನ ಪುಣ್ಯ!
ತಾ : ಲೇ ತಲೆಹರಟೆ ಮಾಡ್ಬೇಡ.
ನ : ನೋಡಪ್ಪ ನನ್ನ ಗುರಿ ಏನಿದ್ದರೂ ಸುಖವಾಗಿ ಇರುವುದು. ನನ್ನ ಗುರಿ ಮನಶ್ಶಾಂತಿ
ತಾ : ಈ ಕಟ್ಟು ಕತೆಗಳಿಂದ ಮನಶ್ಶಾಂತಿ ಸಿಗುವುದೇ ?
ನ : ಎಲ್ಲರಿಗು ಈ ಭೂಮಿಯಮೇಲೆ ಪ್ರತ್ಯಕ್ಷವಾಗಿ ಕಾಣುವಂತ ವಸ್ತುಗಳಿಂದ ಅರ್ಥ ಮತ್ತು ಪ್ರೇರಣೆ ಸಿಗುವುದಿಲ್ಲ.ಒಂದು ಕಟ್ಟು ಕತೆ ಇರಲೇಬೇಕು. ನಮ್ಮ ಸಮಾಜ ನಡೆಯುವುದೇ ಕಟ್ಟು ಕತೆಗಳಿಂದ
ತಾ : ಏನು ಹಾಗೆಂದರೆ ? ನೀನು ಈಗ ಏನೇನೋ ಮಾತಾಡುತ್ತಿದ್ದೀ ಯ!
ನ : ಒಂದು ಕತೆ ನಿಜ ಕತೆ ಇರಲಿ ಕಟ್ಟು ಕತೆ ಇರಲಿ .ಈ ಥರ ಒಬ್ಬ ದೇವರಿದ್ದಾನೆ ಅಂತ ನಾನು ಕಣ್ಣು ಮುಚ್ಚಿಕೊಂಡು ನಂಬಿದರೆ ಅದರಿಂದ ನನಗೆ ಒಂತರ ನೆಮ್ಮದಿ ಸಿಗುತ್ತದೆ. ದಿನವೆಲ್ಲ ಆಫೀಸಿನಲ್ಲಿ ದುಡಿದು ದಣಿದು ಮನೆಗೆ ಬಂದಮೇಲೆ ಆ ಯಾವ್ದೋ ಒಂದು ಕತೆ ಕೇಳಿದರೆ ತುಂಬ ಶಾಂತಿ ಉಂಟುಮಾಡುತ್ತದೆ .ಹಾಗೆ ಒಬ್ಬ ದೇವರಿದ್ದಾನೆ ಮತ್ತು ಅವನು ಎಲ್ಲವನ್ನು ಹಾಳಾಗದಂತೆ ನೋಡಿಕೊಳ್ಳುತ್ತಾನೆ ಅಂತ ನಂಬಿದರೆ ಕೂಡ ನೆಮ್ಮದಿ ಉಂಟು ಮಾಡುತ್ತದೆ . “Hope is hope, whether real or fake”
ತಾ : ನನಗೆ ಇದು ಒಪ್ಪಿಕೊಳ್ಳುವುದು ಕಷ್ಟ .ಆದರೆ ಇರಲಿ . ನನ್ನ ಚಿಂತೆ ಏನೆಂದರೆ ಈ ದೇವರ ಕತೆ ಇಲ್ಲಿಗೆ ನಿಲ್ಲುವುದಿಲ್ಲ .ನಿನ್ನ ದೇವರಿಗಿಂತ ನನ್ನ ದೇವರು ಉನ್ನತ ಮತ್ತು ಶ್ರೇಷ್ಠ ಅಂತ ಜಂಜಾಟ ಶುರು ಆಗುತ್ತದೆ. ಆಮೇಲೆ ನನ್ನ ದೇವರು ನಿಜ ನಿನ್ನ ದೇವರು ಸುಳ್ಳು . ನಮ್ಮ ಧರ್ಮ ಉದ್ಧಾರಕ್ಕೆ ದಾರಿ ನಿನ್ನ ಧರ್ಮ ವಿನಾಶ, ದುಷ್ಟತನಕ್ಕೆ ದಾರಿ. ಈ ಒಂದೋ ಎರಡೋ ಮಕ್ಕಳ ಕತೆಗಳನ್ನು ಮೀರಿ ಇದೇ ಒಂದು ದೊಡ್ಡ ವಿಷಯವಾಗುತ್ತದೆ. ಯುದ್ಧಕ್ಕೆ ನರಮೇಧಕ್ಕೆ ಇತಿಹಾಸದಲ್ಲಿ ಇದೇ ಅತಿ ದೊಡ್ಡ ಕಾರಣವಾಗಿತ್ತು .
ನ : ಇರಬಹುದು . ನನ್ನ ಪ್ರಕಾರ ಯುದ್ಧ ಮತ್ತು ಜಗಳಗಳು ನಮ್ಮ ಮಾನವ ಸಮಾಜದ ಸ್ವಭಾವ ಹೊರೆತು ಅದು ಧರ್ಮದ ಸ್ವಭಾವವಲ್ಲ . ನಾವು ನಂಬಿರುವುದು ಎಲ್ಲ ಕಟ್ಟು ಕತೆಗಳನ್ನೇ .ನಾನು ಹೇಳಿದ್ದೆನಲ್ಲ, ನಮ್ಮ ಸಮಾಜ ಕಟ್ಟು ಕತೆ ಗಳಿಂದಲೇ ನಡೆಯುವುದು.ಈ ಭಾರತ ದೇಶ ಅಂತ ನಿಜವಾಗಿ ಇದೆಯೇ? .ಇದು ಕಟ್ಟು ಕತೆ ಅಲ್ಲವೇ ? ನಾವು ಎಲ್ಲ ಕನ್ನಡಿಗರು ಒಂದೇ ಮೂಲದಿಂದ ಎನ್ನುವುದೂ ಕೂಡ ಒಂದು ಕಟ್ಟು ಕತೆ. ಎಷ್ಟು ಕನ್ನಡಿಗ ರಾಜಗಳ ನಡುವೆ ಪರಸ್ಪರ ಯುದ್ಧ ನಡೆದಿದೆಯೋ ಹಿಂದೆ . ಈ ಕರ್ನಾಟಕ ರಾಜ್ಯವೂ ಒಂದು ಕಟ್ಟು ಕತೆನೇ. ಮಾನವ ಹಕ್ಕುಗಳು ಮತ್ತು ನಮ್ಮ ಸಂವಿಧಾನ ಕೂಡ.
ನಮ್ಮ ಸಮಾಜದಲ್ಲಿ ಸಂಪೂರ್ಣ ಸಮಾನತೆ ಮೂಡಿ ಬಂದರೆ ಯಾರೂ ಕಳ್ಳತನ ಮಾಡುವುದಿಲ್ಲ ಮತ್ತು ಜನರ ಎಲ್ಲ ಸ್ವಾರ್ಥಗಳೂ ಆವಿಯಾಗುತ್ತದೆ ಅಂತ ಕೊಮ್ಯೂನಿಸ್ಟ್ ಅವರು ಹೇಳುತ್ತಾರೆ . ಅದು ಒಂದು ಕಟ್ಟು ಕತೆ ಅಂತ ಹೇಳಕ್ಕಾಗಲ್ಲ, ಆದರೆ ಒಂದು ಭ್ರಮೆ ಅಂತ ನೇ ಹೇಳಬೇಕು . ಇಂತಹ ಪರಿಸ್ಥಿತಿಯಲ್ಲಿ ಸಾವಿರಾರು ವರುಷಗಳ ಹಿಂದೆ ಒಬ್ಬ ಯುವರಾಜ ತೇಲಾಡುವ ಬಂಡೆಗಳ ಸೇತುವೆ ಕಟ್ಟಿ ಕಡಲು ದಾಟಿದ ಮತ್ತು ಇಂದು ಅವನನ್ನು ಪೂಜಿಸಿದರೆ ಅವನು ಅನುಗ್ರಹಿಸುತ್ತಾನೆ ಎನ್ನುವದು ಕೂಡ ಅಷ್ಟೇ ತಪ್ಪು ಅಥವಾ ಸರಿ . ಏನೋ ಒಂದು ಅನುಸರಿಸುವುದಕ್ಕೆ ಅದರ ಹಿಂದೆ ಇರೋ ನಂಬಿಕೆಗೆ ಸಾಕ್ಷಿ ಇರಲೇಬೇಕು ಎನ್ನುತ್ತೀಯಾ? ನನ್ನ ವೈಯಕ್ತಿಕ ನಂಬಿಕೆಗಳು ಕೂಡ ಏಕೆ ತಾರ್ಕಿಕವಾಗಿ ಇರಬೇಕು? ಅವಿಂದ ನನಗೆ ನೆಮ್ಮದಿ ಬರಬೇಕು ಅಷ್ಟೇ
ತಾ : ಅಯ್ಯೋ ರಾಮ ನೀನು ಈ ಥರ ಮಾತಾಡುವುದು ಶುರು ಹಚ್ಚಿಕೊಂಡಿದ್ದೀಯೇನೋ? ಆದರೆ ಈ ನಿನ್ನ ವೈಯಕ್ತಿಕ ನಂಬಿಕೆ ಎಲ್ಲರು ನಂಬಿ ಈ ನಂಬಿರೋ ಗುಂಪು ಸಮಾಜದಲ್ಲಿ ಈ ನಂಬಿಕೆ ಗೋಸ್ಕರ ಗಾಲಾಟೆ ಮತ್ತು ಹಿಂಸೆ ಮಾಡಿದರೆ ಯಾರು ಜವಾಬ್ದಾರರು ?
ನ : ನಾವು ನಂಬಿಕೆಗಳ ಅಳತೆ ಮಾಡುವುದು ಹೇಗೆ? ಒಬ್ಬ ಮನುಷ್ಯ ಏನನ್ನೋ ನಂಬುತ್ತಾನೆ ಅಂತ ಹೇಳಿದರೆ ಆ ಮಾತನ್ನು ಖಚಿತಪಡಿಸಲು ಸಾಧ್ಯ ನ? ಮತ್ತೆ ಒಬ್ಬ ತಾರ್ಕಿಕನಾಗಿ ನೀನು ಯಾಕೆ ನಂಬಿಕೆಗಳ ಹಿಂದೆ ಓಡುತ್ತಿದ್ದೀ? ಅದಕ್ಕೆ ಸಾಕ್ಷಿ ಅಂತ ಏನೂ ಇಲ್ಲ .ಇದು ನನ್ನ ನಂಬಿಕೆ ಅದು ನಿನ್ನ ನಂಬಿಕೆ ಅಂತ ಬಾಯಿಗೆ ಬಂದಂತೆ ನಾವು ಹೇಳಬಹುದು . ನಿನ್ನ ತರ್ಕ ಏನಿದ್ದರೂ ಕ್ರಿಯೆಗಳ ಜೊತೆ ಇರಬೇಕು, ನಂಬಿಕೆಗಳ ಜೊತೆ ಅಲ್ಲ .ಅವನು ಏನು ನಂಬಿದ ಅಂತ ನೋಡಬೇಡ .ಅವನು ಏನು ಮಾಡಿದ ಅಂತ ನೋಡು . ಅದನ್ನ ನಾವು ಅಳತೆ ಮಾಡಬಹುದು ಹಾಗೇ ತಾರ್ಕಿಕ ಪರಿಶೀಲನೆ ಮಾಡಬಹುದು. ನಂಬಿಕೆಗೆ ಅಲ್ಲ.
ತಾ : ಹೌದು. ಆದರೆ ಇದರ ಅವಶ್ಯಕತೆ ಏನು? ಯಾವುದೇ ಕಟ್ಟು ಕತೆ ಇಲ್ಲದೆ ಕೂಡ ಬಾಳಬಹುದು. ದೇಶವೂ ಬೇಡ ನಾಡೂ ಬೇಡ ದೇವರೂ ಬೇಡ ಸಮಾನ ಸಮಾಜವೂ ಬೇಡ.ನಿನಗೆ ನೀನೇ ಸುಖ ತರಬಹುದು. ಅವಾಗ ಯಾವ ವಸ್ತುಗಳಿಂದ ಸುಖ ಬರುತ್ತದೆಯೋ ಅವನ್ನು ಪಡೆಯಲು ಹೋರಾಡು.ಅದು ಹೇಗೆ ಪಡೆಯುವುದು ನಾನು ಹೇಳುತ್ತೇನೆ ನನಗೆ ತಿಳಿದಿರುವ ಮಟ್ಟದ ವರೆಗು.
ನ : ಅದು ಮಾನವ ಸ್ವಭಾವ . ನಮ್ಮ ಡಿ. ಎನ್. ಎ. ಯ ಶಾಪ. ನಮಗೆ ಬೇರೆ ಅವರ ಜೊತೆ ಇರುವ ಸಂಗತಿಗಳಿಂದಲೇ ಸಂತೋಷ ಸಿಗುವುದು. ಇದು ನಿನಗೂ ಗೊತ್ತು. ಮತ್ತು ಈ ಕಟ್ಟು ಕತೆಗಳಿಂದ ಇವರು ನಮ್ಮವರು ಅವರು ನಮ್ಮವರಲ್ಲ ಅಂತ ಹೇಳಲು ಸಾಧ್ಯ. “Tribal instinct” ಅಂತ ಹೇಳುತ್ತಾರಲ್ಲ - ಅದು.
ತಾ : ಆದರೆ ನಾನು ಕಂಡಂತೆ ಬಹಳಷ್ಟು ಜನರು ಅವರಾಗಿಯೇ ಖುಷಿಯಾಗಿ ಇದ್ದಾರೆ . ಒಂಟಿತನದಲ್ಲಿ ತುಂಬಾ ಜನಕ್ಕೆ ಸುಖವಿದೆ
ನ : ಅದು ನಿಜ . ಆದರೆ ಈ ಥರ ಎಷ್ಟು ಜನರು ಇದ್ದಾರೆ ? ಅವರು ಏನೋ ಪುಣ್ಯ ಮಾಡಿದ್ದಾರೆ ಅವರಾಗಿಯೇ ಸುಖವಾಗಿ ಇದ್ದಾರೆ ಎಂದರೆ . ನಮ್ಮೆಲ್ಲರಿಗೂ ಆ ಥರ ಗಟ್ಟಿ ಮನಸ್ಸು ಇಲ್ಲ . ಅಷ್ಟು ಸ್ಥಿರ ಮನಸ್ಸೂ ಇಲ್ಲ. ನಮ್ಮೆಲ್ಲರ ಬಾಳಿನಲ್ಲಿ ಒಂದಲ್ಲಾ ಒಂದು ಗೊಂದಲ ಇದ್ದೇ ಇರುತ್ತದೆ . ಅಂತ ಸಂದರ್ಭದಲ್ಲಿ ನಾವಾಗ್ನಾವೇ ಸುಖವಾಗಿರಲು ಸಾಧ್ಯವೇ? ಅವಾಗ ನಮ್ಮ ಮನಸು ಇಂತ ಒಂದು ತಂಡ ಹುಡುಕುತ್ತದೆ , ಇವರು ನಮ್ಮವರು ಅಂತ ಹೇಳುವುದಕ್ಕೆ .
ಬೇರೆ ಅವರಿಂದ ಅಥವಾ ಯಾವ್ದೋ ಒಂದು ತತ್ವ ಅಥವಾ ಭಾವನೆ ಇಂದ ಬಾಳಿಗೆ ಒಂದು ಅರ್ಥ ಎಂಬುದನ್ನು ಹುಡುಕುವುದರಲ್ಲಿ ಮನಸು ಅದಾಗೆ ತೊಡಕುತ್ತದೆ . ದಿನಾ ಬೆಳಿಗ್ಗೆ ಎದ್ದು ಲವಲವಿಕೆ ಇಂದ ಇರುವುದಕ್ಕೆ ಒಂದು ಪ್ರೇರಣೆ ಅಥವಾ ಒಂದು ಗುರಿ ಅಂತ ಇರಲೇಬೇಕು. ಇದು ಹೊರಗಿನಿಂದಲೇ ಬರುವುದು ಸಾಮಾನ್ಯವಾಗಿ . ಅದೇ ಹುಡುಕಾಟ ವಿಸ್ತಾರವಾಗಿ ಈ ಥರ ನಂಬಿಕೆಗಳನ್ನು ಮೂಡಿಸುತ್ತದೆ
ನಾವು ನಮ್ಮನಾವೆ ಅತಿ ತಾರ್ಕಿಕರು ಅಂತ ತಿಳಿದರು ನಾವು ಆಳವಾಗಿ ಯೋಚಿಸಿದರೆ ನಾವು ಅಷ್ಟು ಏನು ತಾರ್ಕಿಕರು ಅಲ್ಲ ಅಂತ ಗೊತ್ತಾಗುತ್ತದೆ. ಇರುವುದಕ್ಕೆ ಸಾಧ್ಯವೂ ಇಲ್ಲ. “ತರ್ಕ ಉನ್ನತ, ಆದರೆ ಮಾನವ ಮನಸಿನ ತಾರ್ಕಿಕ ಬಲ ಮತ್ತು ಸಾಮರ್ಥ್ಯ ಸೀಮಿತ” ಅಂತ ಒಂದು ಕಡೆ ತುಂಬಾ ಚೆನ್ನಾಗಿರುವ ಸಾಲು ಓದಿದ್ದೆ ನಾನು
ತ : ಹ್ಮ್! ನಿನ್ನ ಮಾತಲ್ಲಿ ಎಲ್ಲೋ ಒಂದು ತಪ್ಪಿದೆ ಆದರೆ ಏನು ಅಂತ ಕೂಡಲೇ ಹೇಳುವುದಕ್ಕೆ ಬರುತ್ತಿಲ್ಲ. ನಾನು ಸ್ವಲ್ಪ ಯೋಚಿಸಿ ನನ್ನ ಉತ್ತರ ನೀಡುತ್ತೀನಿ
ನ : ಆಗಲಿ! ಇಲ್ಲೇ ಇರುತ್ತೀನಿ. ನನಗೂ ತಾರ್ಕಿಕವಾಗಿಯೇ ಜೀವನ ನಡೆಯಿಸಬೇಕು ಅಂತ ಇಷ್ಟ. ಆದರೆ ಸಂಪೂರ್ಣವಾಗಿ ಆಗಲಿಲ್ಲ ಅಂದರೆ ಆದಷ್ಟು ತಾರ್ಕಿಕವಾಗಿ ನಡೆಯಿಸುವುದರಲ್ಲಿ ಏನು ಅರ್ಥ ಇಲ್ಲ ಅನಿಸುತ್ತದೆ. ಜಗತ್ತಿನಲ್ಲಿ ಪ್ರತಿ ಒಂದು ವಿಷಯದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲದೆ ಹೋದರೆ ಇದಕ್ಕೆ ಅರ್ಥ ಇಲ್ಲ. ಅರೆ ತಾರ್ಕಿಕ (Half-logical) ಅಂತ ಏನು ಇಲ್ಲ. ಹೀಗಿದ್ದಾಗ ಎಲ್ಲಿ ತರ್ಕದಿಂದ ನಮ್ಮ ಕೆಲಸ ಆಗಬೇಕೋ ಅಲ್ಲಿ ಉಪಯೋಗಿಸೋಣ. ನಮ್ಮ ಲ್ಯಾಬ್ ಮತ್ತು ಸಂಶೋಧನೆಗಳಲ್ಲಿ. ಮಿಕ್ಕಿದ್ದು ದೇವರ ಹೆಸರು ಹೇಳಿಕೊಂಡೋ ಅಥವಾ ನಾಣ್ಯ ಮೇಲೆಸೆದು ಯಾವ ಕಡೆ ಬೀಳುತ್ತೋ ಅದರ ಪ್ರಕಾರ ಜೀವನ ನಡೆಯೀಸೋಣ
ತ : ಈ ಮಾತುಕತೆ ಇಲ್ಲಿಗೆ ಇನ್ನು ಮುಗಿದಿಲ್ಲ! ಒಂದು ದಿನ ನೀನು ನನ್ನ ಎಲ್ಲ ಮಾತು ಕೇಳುತ್ತೀಯ!
ನ : ನೋಡೋಣ ಸ್ವಾಮಿ